ಬೆಂಗಳೂರು, ಅಕ್ಟೋಬರ್ 30:
ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ನವೆಂಬರ್‌ನಲ್ಲಿ ಈ ಆಯೋಗ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆ ಇದೆ. ವೇತನ, ಭತ್ಯೆ ಹೆಚ್ಚಳ ಸೇರಿದಂತೆ ರಾಜ್ಯ ಸರ್ಕಾರಿ ನೌಕರರು ಆಯೋಗಕ್ಕೆ ಹಲವು ಮನವಿಗಳನ್ನು ಸಲ್ಲಿಕೆ ಮಾಡಿದ್ದಾರೆ. ವೇತನ ಎಷ್ಟು ಏರಿಕೆಯಾಗಲಿದೆ? ಎಂದು ಕಾದು ಕುಳಿತಿದ್ದಾರೆ.
ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವೇತನ ಆಯೋಗಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ವೇತನ ಪರಿಷ್ಕರಣೆ, ಭತ್ಯೆ ಹೆಚ್ಚಳ, ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡುವುದು ಸೇರಿದಂತೆ ಹಲವಾರು ಅಂಶಗಳ ಕುರಿತು ಗಮನ ಸೆಳೆಯಲಾಗಿದೆ.
ಇದೇ ವರದರಿಯಲ್ಲಿ ಸಚಿವಾಲಯದಲ್ಲಿ ವಾರಕ್ಕೆ 5 ದಿನಗಳ ಕೆಲಸದ ದಿನಗಳ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ಬ್ಯಾಂಕುಗಳಲ್ಲಿ ಇದೇ ಮಾದರಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಚರ್ಚೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಸಹ ಇದೇ ಬೇಡಿಕೆಯನ್ನು ಆಯೋಗಕ್ಕೆ ಸಲ್ಲಿಸಿದೆ. ಸರ್ಕಾರಕ್ಕೆ ಆಯೋಗ ಏನು ಶಿಫಾರಸು ಮಾಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವಾಲಯದ ವರದಿಯ ಶಿಫಾರಸುಗಳು
* ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ ನೌಕರರು ಸರ್ಕಾರಿ ಕೆಲಸವನ್ನು ಸೃಜನಾತ್ಮಕವಾಗಿ ಮಾಡಲು ಉತ್ತೇಜಿಸಲು ನೀಡುತ್ತಿರುವ ಸರ್ವೋತ್ತಮ ಪ್ರಶಸ್ತಿಯು ಒಂದು ಉತ್ತಮ ಕಾರ್ಯವಾಗಿದೆ. ಈ ಪ್ರಶಸ್ತಿ ಪಡೆದವರಿಗೆ ಒಂದು ವಾರ್ಷಿಕ ವೇತನ ಬಡ್ತಿ ನೀಡುವುದರಿಂದ ಇತರರು ಉತ್ತಮ ಕಾರ್ಯನಿರ್ವಹಿಸಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ.
* ರಾಜ್ಯದಲ್ಲಿ ಸುಮಾರು 2.40 ಲಕ್ಷ ಎನ್‌ಪಿಎಸ್ ಗೆ ಒಳಪಡುವ ನೌಕರರಿದ್ದು, ಎನ್‌ಪಿಎಸ್ ಒಂದು ಕರಾಳ ವ್ಯವಸ್ಥೆಯಾಗಿದೆ. ಅದನ್ನು ರದ್ದುಗೊಳಿಸಿ ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೊಳಿಸಬೇಕು.
* ಬಹುಮಹಡಿ ಕಟ್ಟಡ, ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವಾಲಯದ ಅನೇಕ ಕಚೇರಿಗಳಿಗೆ ಸ್ಥಳದ ಅಭಾವ ತೀವ್ರವಾಗಿದ್ದು, ಕಾರಿಡಾರ್‌ಗಳಲ್ಲಿ ಅಲ್ಮೆರಾಗಳನ್ನು ಇಡಲಾಗಿದೆ. ಈ ಅಲ್ಮೆರಾದಲ್ಲಿ ಗೌಪ್ಯ, ಪ್ರಮುಖ ವಿಷಯಗಳ ಕಡತ (ಇಲಾಖಾ ವಿಚಾರಣೆ ಮುಂತಾದವುಗಳು) ಅನಿವಾರ್ಯವಾಗಿ ಇಡಲಾಗಿದ್ದು, ಭದ್ರತೆಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಆದ್ದರಿಂದ ಸಚಿವಾಲಯದ ಎಲ್ಲಾ ಇಲಾಖೆ/ ಶಾಖೆಗಳಿಗೆ ಸ್ಥಳ ಹಂಚಿಕೆ ಏಕರೀತಿಯಲ್ಲಿರಬೇಕು. ಸಚಿವಾಲಯದ ಎಷ್ಟೋ ಅಪರ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು ಹಾಗೂ ಅಧೀನ ಕಾರ್ಯದರ್ಶಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ನೀಡಲಾಗಿಲ್ಲ. ಇದರಿಂದಾಗಿ ಕಡತಗಳ ನಿರ್ವಹಣೆಯಲ್ಲಿ ತೀವ್ರವಾದ ತೊಂದರೆಯಾಗುತ್ತಿದೆ.
* ಬಹುಮಹಡಿ ಕಟ್ಟಡದಲ್ಲಿ ಸಚಿವಾಲಯದ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಅದರ ಎದುರು ಭಾಗದಲ್ಲಿಯೇ ಸಾರ್ವಜನಿಕ ರಸ್ತೆಯೂ ಕೂಡ ಇರುವುದರಿಂದ ವಾಹನಗಳ ತೀವ್ರ ಓಡಾಡ, ಗದ್ದಲದಿಂದಾಗಿ ಕಚೇರಿ ಕಾರ್ಯನಿರ್ವಹಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಹಾಗೂ ಸಚಿವಾಲಯದ ಸಿಬ್ಬಂದಿಗಳ ಆಗಮನ/ ನಿರ್ಗಮನಕ್ಕೂ ಕೂಡ ತೊಂದರೆಯಾಗುತ್ತಿದೆ. ವಿಕಾಸಸೌಧ ಹಾಗೂ ವಿಧಾನಸೌಧ ಕಟ್ಟಡಕ್ಕೆ ಒದಗಿಸಿದ ರೀತಿಯಲ್ಲಿಯೇ ಬಹುಮಹಡಿ ಕಟ್ಟಡಕ್ಕೂ ಕೂಡ ಭದ್ರತೆಯನ್ನು ಒದಗಿಸುವ ಅಗತ್ಯತೆ ಇದೆ.
* ಸಚಿವಾಲಯದ ಸಿಬ್ಬಂದಿಗಳಲ್ಲಿ ಇನ್ನಷ್ಟು ಕಾರ್ಯಕ್ಷಮತೆಯನ್ನು ಉತ್ತಮಪಡಿಸಲು ಕೇಂದ್ರ ಸರ್ಕಾರದ ಸಚಿವಾಲಯದ ಮಾದರಿಯಲ್ಲಿ ಎಲ್ಲಾ ಹಂತಗಳಲ್ಲಿಯೂ ತರಬೇತಿಯನ್ನು ನೀಡುವಂತಾಗಬೇಕು. ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ ಹಂತದ ಎಲ್ಲಾ ಅಧಿಕಾರಿಗಳಿಗೆ ವಾಹನ ಸೌಲಭ್ಯವನ್ನು ಕಲ್ಪಿಸಬೇಕು.
* ಪ್ರಸ್ತುತ ಇಡೀ ಸರ್ಕಾರಿ ವ್ಯವಸ್ಥೆಯಲ್ಲಿ ಒಂದೇ ಕಡೆ ಸುಮಾರು 6 ಸಾವಿರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರೆ ಅದು ಸಚಿವಾಲಯ ಮಾತ್ರ ಖಾಸಗಿ ಸಂಸ್ಥೆಗಳು ತಮ್ಮಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಉತ್ತಮ ಕ್ಯಾಂಟಿನ್/ ಕುಡಿಯುವ ನೀರು/ ಶೌಚಾಲಯ/ ಔಷಧಾಲಯ ಮುಂತಾದವುಗಳನ್ನು ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ವಿಶೇಷವಾಗಿ ಒದಗಿಸುತ್ತದೆ. ಆದರೆ ಸಚಿವಾಲಯದಲ್ಲಿ ಸಿಬ್ಬಂದಿಗಳಿಗೆ ಸೂಕ್ತವಾದ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಮತ್ತು ಔಷಧಾಲಯ ವ್ಯವಸ್ಥೆ ಇರುವುದಿಲ್ಲ.
* ವಿಧಾನಸೌಧದ ಹೊರಭಾಗದಲ್ಲಿ ಕಾರ್ ಶೆಡ್‌ನಲ್ಲಿ ಔಷಧಾಲಯವಿದೆ ಹಾಗೆಯೇ ಬಹುಮಹಡಿ ಕಟ್ಟಡದಲ್ಲಿ ಔಷಧಾಲಯವನ್ನು ಕಾರ್‌ಶೆಡ್‌ನಲ್ಲಿ ಒದಗಿಸಲಾಗಿದೆ. ಇಡೀ ರಾಜ್ಯದಲ್ಲಿ ಸರ್ಕಾರದ ಆಸ್ಪತ್ರೆಗಳಿಗೆ ಕಟ್ಟಡ ಮಂಜೂರಾತಿ ನೀಡುವ ಅಧಿಕಾರ ಹೊಂದಿರುವ ಸಚಿವಾಲಯದಲ್ಲಿ ಒಂದು ಉತ್ತಮ ಆಸ್ಪತ್ರೆ ಇಲ್ಲದಿರುವುದು ವಿಪರ್ಯಾಸ. ವಿಕಾಸಸೌಧ ಕಟ್ಟಡದಲ್ಲಿ ತುರ್ತು ಚಿಕಿತ್ಸಾ ಘಟಕವನ್ನೂ ಕೂಡ ಇದುವರೆವಿಗೂ ಕಲ್ಪಿಸಿರುವುದಿಲ್ಲ. ಸಚಿವಾಲಯದ ಸಿಬ್ಬಂದಿಗಳ ಹಿತರಕ್ಷಣೆಯ ದೃಷ್ಟಿಯಿಂದ ಇದನ್ನು ಆದ್ಯತೆಯ ಮೇರೆಗೆ ಕಲ್ಪಿಸಬೇಕಾಗಿದೆ.
* ಸುಮಾರು 6 ಸಾವಿರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿರುವ ಸಚಿವಾಲಯದಲ್ಲಿ ಮಹಿಳಾ ಉದ್ಯೋಗಿಗಳು ಸರಿಸುಮಾರು ಶೇ.50 ಭಾಗವಿದ್ದು, ಸಚಿವಾಲಯದ ಹಲವು ಮಹಿಳಾ ಉದ್ಯೋಗಿಗಳು ತಮ್ಮ ಪುಟ್ಟ ಮಕ್ಕಳನ್ನು ಬೇರೆ ಬೇರೆ ಕಡೆಯಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಕಚೇರಿಗೆ ಬರಬೇಕಾಗುವ ಅನಿವಾರ್ಯತೆ ಇದೆ. ಆದರೆ ಸಚಿವಾಲಯದಲ್ಲಿ ಇದುವರೆವಿಗೂ ಒಂದು ಸುಸಜ್ಜಿತ ಶಿಶುಪಾಲನಾ ಕೇಂದ್ರ ಇರುವುದಿಲ್ಲ. ಆದ್ದರಿಂದ ಸಚಿವಾಲಯದ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಉತ್ತಮ ಶಿಶುಪಾಲನಾ ಕೇಂದ್ರವನ್ನು ತೆರೆಯುವ ಅಗತ್ಯತೆ ಇದೆ.
* ಸಾಮಾನ್ಯವಾಗಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸರ್ಕಾರಿ ನೌಕರರ ತರಬೇತಿ ಕಟ್ಟಡವಿರುತ್ತದೆ. ಆದರೆ ಸಚಿವಾಲಯ ತರಬೇತಿ ಸಂಸ್ಥೆ ಸರ್ಕಾರದ ಅತ್ಯಂತ ಹಳೆಯ ತರಬೇತಿ ಸಂಸ್ಥೆಯಾಗಿದ್ದರೂ ಇದಕ್ಕೆ ಇನ್ನೂ ಪೂರ್ಣ ಪ್ರಮಾಣದ ಕಟ್ಟಡವನ್ನು ಸರ್ಕಾರ ಒದಗಿಸಿಬೇಕಿದೆ.
0 Response to 7th Pay Commission; ವಾರಕ್ಕೆ 5 ದಿನದ ಕೆಲಸಕ್ಕೆ, ಸಚಿವಾಲಯದ ಸಿಬ್ಬಂದಿ ಬೇಡಿಕೆ
Post a Comment